ಮ್ಯಾಕ್ಸ್ ಮುಲರ್, ಫ್ರೆಡ್ರಿಕ್
1823-1900. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಾಚ್ಯ ವಿದ್ಯಾಸಂಶೋಧಕರು ಹಾಗೂ ವೇದವಿದ್ಯಾಕೋವಿದರು. ಇವರು ಹುಟ್ಟಿನಿಂದ ಜರ್ಮನಿಯವರಾದರೂ ಇಂಗ್ಲೆಂಡಿನ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡರು. ತಂದೆ ಜರ್ಮನ್ ಭಾಷೆಯ ಖ್ಯಾತ ಕವಿ ವಿಲ್ಹೆಲ್ಮ್ ಮುಲರ್ (1794-1827). ಲೀಪಜಿಗ್ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾಷೆಗಳ ಅಧ್ಯಯನ ಮಾಡಿ ಇಪ್ಪತ್ತನೆಯ ವಯಸ್ಸಿನಲ್ಲೇ ಡಾಕ್ಟೊರೇಟ್ ಪದವಿ ಗಳಿಸಿದರು. ಮುಂದೆ ಭಾಷಾವಿಜ್ಞಾನ, ತತ್ತ್ವಶಾಸ್ತ್ರಗಳಲ್ಲಿ ಅಧ್ಯಯನ ಮುಂದುವರಿಸಿ, 1845ರಲ್ಲಿ ಪ್ಯಾರಿಸ್ ನಗರದಲ್ಲಿ ಸಂಸ್ಕøತ ಪಂಡಿತನಾಗಿದ್ದ ಯೂಜಿನ್ ಬರ್ನೌಫರ ಸಂಪರ್ಕದಿಂದ ವೇದ, ಅವೆಸ್ತಾ ಮುಂತಾದ ಪ್ರಾಚೀನ ಧರ್ಮಗ್ರಂಥಗಳ ವಿಶೇಷಾಭ್ಯಾಸ ನಡೆಸಿದರು. ಅಲ್ಲಿ ಇವರ ಸಹಪಾಠಿಗಳೆಂದರೆ ರುಡಾಲ್ಫ್ ರೋಟ್, ಥಿಯೋಡೋರ್ ಗೋಲ್ಡ್ ಸ್ಟುಕರ್ ಮುಂತಾದ ಮಹಾಮೇಧಾವಿಗಳು. 
ಬರ್ನೌಫರ ಸೂಚನೆಯಂತೆ ಮ್ಯಾಕ್ಸ್ ಮುಲರ್ ಋಗ್ವೇದ ಸಂಹಿತೆಯ ಪ್ರಥಮ ಮುದ್ರಣದ ಪ್ರಯತ್ನ ಕೈಗೊಂಡರು. ಇದಕ್ಕಾಗಿ ಋಗ್ವೇದದ ಮೂಲಪಾಠ ಹಾಗೂ ಸಾಯಣ ಭಾಷ್ಯಗಳ ಅನೇಕ ಹಸ್ತಪ್ರತಿಗಳನ್ನು ಸಂಪಾದಿಸಿ ಪಾಠ ನಿರ್ಣಯಕಾರ್ಯ ನಡೆಸಿದರು. ಇದರ ವೆಚ್ಚವನ್ನು ಈಸ್ಟ್ ಇಂಡಿಯಾ ಕಂಪನಿ ವಹಿಸಿಕೊಂಡಿತು. ಕೆಲಕಾಲ ಲಂಡನ್‍ನಲ್ಲೇ ಇದ್ದರೂ ಈ ಋಗ್ವೇದ ಸಂಪುಟಗಳು ಆಕ್ಸ್‍ಫರ್ಡ್ ನಗರದ ಮುದ್ರಣಾಲಯದಲ್ಲಿ ಅಚ್ಚಾಗುತ್ತಿದ್ದ ಕಾರಣ ಆಕ್ಸ್‍ಫರ್ಡಿಗೇ ಹೋಗಬೇಕಾಯಿತು. 1849ರಲ್ಲಿ ಋಗ್ವೇದ - ಮೊದಲ ಸಂಪುಟ, ಸಾಯಣಭಾಷ್ಯಸಮೇತವಾಗಿ ಹೊರಬಂದಿತು. ಹೀಗಾಗಿ ಆಕ್ಸ್‍ಫರ್ಡ್‍ಗೆ ಹೋದ ಮುಲರ್ ಜೀವಮಾನ ಪರ್ಯಂತ ಅಲ್ಲಿಯೇ ಉಳಿದರು. 

	ಇವರು ಅಲ್ಲಿ ಆಧುನಿಕ ಐರೋಪ್ಯ ಭಾಷಾಪ್ರಾಧ್ಯಾಪಕರಾಗಿ ಸೇರಿದರೂ 1853ರಲ್ಲಿ ಬೋಡೀಲಿಯನ್ ಗ್ರಂಥಭಂಡಾರಿಯ ಹುದ್ದೆ ಪಡೆದರು. ಆ ಹುದ್ದೆಯಲ್ಲಿ 1863ರ ತನಕವೂ ಮುಂದುವರಿದರು. ಅನಂತರ ಮತ್ತೆ ಆ ಸ್ಥಾನಕ್ಕೆ ಆಯ್ಕೆಯಾಗಿ 1894ರಲ್ಲಿ ವಿಶ್ರಾಂತಿ ಪಡೆದರು.  

	1859ರಲ್ಲಿ ಮ್ಯಾಕ್ಸ್ ಮುಲರ್ ಇಂಗ್ಲೆಂಡಿನ ಜಾರ್ಜಿಯಾನ ಅಡಿಲೇಡ್ ಎಂಬಾಕೆಯನ್ನು ಮದುವೆಯಾದಳು. ಅದೇ ವರ್ಷ ಪ್ರಾಚೀನ ಸಂಸ್ಕøತ ಸಾಹಿತ್ಯ ಚರಿತ್ರೆ (ಹಿಸ್ಟರಿ ಆಫ್ ಏನ್ಷಿಯಂಟ್ ಸ್ಯಾನ್ಸ್‍ಕ್ರಿಟ್ ಲಿಟರೇಚರ್) ಎಂಬ ತಮ್ಮ ಪ್ರಮುಖ ಗ್ರಂಥವನ್ನು ಪ್ರಕಟಿಸಿದರು. ಆ ಗ್ರಂಥದ ವ್ಯಾಪ್ತಿ ಕೇವಲ ವೇದಕಾಲಕ್ಕೆ ಸೀಮಿತವಿದ್ದರೂ ವೇದ ಗ್ರಂಥಗಳ ಕಾಲನಿರ್ಣಯದ ವಿಷಯದಲ್ಲಿ ಅಮೂಲ್ಯವಾದ ಸೂಚನೆಗಳನ್ನು ಒಳಗೊಂಡಿದೆ. ಈ ಗ್ರಂಥರಚನೆಗಾಗಿ ಮ್ಯಾಕ್ಸ್ ಮುಲರ್ ಇನ್ನೂ ಅಚ್ಚಾಗದಿದ್ದ ಹಸ್ತಪ್ರತಿಗಳ ಅಪಾರ ರಾಶಿಯನ್ನೇ ಶೋಧಿಸಿದರು. 

ಭಾಷಾವಿಜ್ಞಾನವನ್ನು ಕುರಿತು ರಾಯಲ್ ಇನ್‍ಸ್ಟಿಟ್ಯೂಟ್ ಸಂಸ್ಥೆಯಲ್ಲಿ 1861-63ರಲ್ಲಿ ಉಪನ್ಯಾಸಗಳನ್ನು ನೀಡಿ ಮಹಾವಿದ್ವಾಂಸರೆಂಬ ಖ್ಯಾತಿಗೆ ಪಾತ್ರರಾದರು. ನೀರಸವಾದ ವಿಷಯದಲ್ಲೂ ಸರಸ ಸ್ಫೂರ್ತಿಯನ್ನು ಸ್ಪಂದಿಸುವ ಉಪನ್ಯಾಸಕಲೆ ಇವರಿಗೆ ಹಸ್ತಗತವಾಗಿತ್ತು. ತೌಲನಿಕ ಭಾಷಾವಿಜ್ಞಾನದಲ್ಲಿ ಇಂದು ಇವರ ಅನೇಕ ನಿರ್ಣಯಗಳು ಬಾಧಿತವೆನಿಸಿದ್ದರೂ ಇವರ ಪ್ರಾರಂಭಿಕ ಸಂಶೋಧನೆ ಉನ್ನತಮಟ್ಟದ್ದೆಂಬುದು ನಿರ್ವಿವಾದ. 19ನೆಯ ಶತಮಾನದ ವಿದ್ವಾಂಸರಲೆಲ್ಲ ಇವರಿಗೆ ಅಗ್ರಮಾನ್ಯತೆ ಸಲ್ಲುವಂತಾಗಲು ಇವರ ಭಾಷೆಯ ಸೊಬಗೂ ಒಂದು ಕಾರಣ. ಶಬ್ದ ಮತ್ತು ಅರ್ಥಗಳ ಸಂಪೃಕ್ತಿ ಎಷ್ಟೊಂದು ಗಾಢ ಎಂಬುದನ್ನು ಇವರ ಇನ್ನೊಂದು ಗ್ರಂಥ ಭಾಷಾ ವಿಜ್ಞಾನ (1887) ಎತ್ತಿ ತೋರಿಸುತ್ತದೆ. ಈ ಗ್ರಂಥಗಳ ಜನಪ್ರಿಯತೆಯಿಂದಾಗಿ ಮ್ಯಾಕ್ಸ್ ಮುಲರ್ ಅವರ ಸಲುವಾಗಿಯೇ ತೌಲನಿಕ ಭಾಷಾ ವಿಜ್ಞಾನ ಪ್ರಾಧ್ಯಾಪಕ ಪೀಠವೊಂದು ಆಕ್ಸ್‍ಫರ್ಡಿನಲ್ಲಿ ಸ್ಥಾಪಿತವಾಯಿತು (1868); ಆ ಪೀಠವನ್ನು ಇವರು 1875 ರ ತನಕ ಅಲಂಕರಿಸಿದ್ದರು. ಜರ್ಮನಿಯ ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯ ಇವರಿಗೆ ಸಂಸ್ಕøತ ಪ್ರಾಧ್ಯಾಪಕ ಪದವಿಗಾಗಿ ಆಹ್ವಾನಿಸಿತು (1879). ಆ ಹುದ್ದೆಯನ್ನು ಸ್ವೀಕರಿಸಿದ ಅಲ್ಲಿ ಒಂದು ಬೇಸಗೆ ಅವಧಿಯ ಕಾಲ ಉಪನ್ಯಾಸಗಳನ್ನು ನೀಡಿದರು. ಅದರಿಂದ ಬಂದ ಗೌರವ ಧನವನ್ನು ಸಂಸ್ಕøತ ವಿಷಯದಲ್ಲಿ ಶಿಷ್ಯ ವೃತ್ತಿಗಳಿಗಾಗಿ ದತ್ತಿಯೆಂದು ಆ ವಿಶ್ವವಿದ್ಯಾಲಯದವರಿಗೇ ದಾನ ಮಾಡಿ ಆಕ್ಸ್‍ಫರ್ಡಿಗೆ ಹಿಂದಿರುಗಿದರು.

	ತೌಲನಿಕ ದೇವತಾರಹಸ್ಯ ವಿಜ್ಞಾನಶಾಸ್ತ್ರಕ್ಕೂ ಇವರೇ ಜನಕರು ಎನ್ನುವಂತಾದರು. ಭಾಷಾ ಪ್ರತಿಬಿಂಬದ ಮಾಧ್ಯಮದಿಂದ ಪೌರಾಣಿಕ ದೇವತಾ ಕಲ್ಪನೆಗಳ ಮೂಲರೂಪವನ್ನರಿಯಲು ಸಂಶೋಧನೆ ನಡೆಸಿ, ಅನೇಕ ಪ್ರಬಂಧಗಳನ್ನು ಬರೆದರು. ಉದಾಹರಣೆಗೆ, ಸಂಸ್ಕøತದ ಸರಣ್ಯೂಃ ಎಂಬ ಶಬ್ದ ಗ್ರೀಕ್‍ನ ಎರಿನ್ಯೂಸ್ ಎಂಬ ಶಬ್ದದ ಸಂವಾದಿಯಾಗಿರುವುದರಿಂದ ಅವುಗಳ ಅರ್ಥದಲ್ಲೂ ಸಾಮ್ಯವಿರಬೇಕೆಂಬ ಇವರ ವಾದ ಇಂದು ವಿದ್ವಾಂಸರಿಗೆ ಮಾನ್ಯವಿಲ್ಲ. ಆದರೂ ಆರ್ಯ-ಭಾಷಾ ವರ್ಗದಿಂದ ಹೊರಗಿನ ಭಾಷಾ ವರ್ಗಗಳ ಬಗೆಗೂ ಮ್ಯಾಕ್ಸ್ ಮುಲರ್ ಅವರ ಸಂಶೋಧನೆಯ ಹರಹು ಯಾರನ್ನಾದರೂ ಚಕಿತಗೊಳಿಸುವಂತಿದೆ.

	ತೌಲನಿಕ ದೇವತಾ ರಹಸ್ಯ ವಿಜ್ಞಾನದಂತೆ ವಿವಿಧ ಮತಧರ್ಮಗಳ ಸಂಶೋಧನೆಗೂ ಮ್ಯಾಕ್ಸ್‍ಮುಲರ್ ಅವರೇ ಮೊದಲಿಗರು. 1870ರಲ್ಲಿ ಇವರು `ಮತ ಧರ್ಮ-ವಿಜ್ಞಾನ ವೆಂಬ ಶೀರ್ಷಿಕೆಯಿಂದ ತಮ್ಮ ಉಪನ್ಯಾಸಗಳನ್ನು ಆರಂಭಿಸಿದರು. ಧರ್ಮ ಪ್ರಚಾರ ಸಂಸ್ಥೆಗಳು ಎಂಬ ಬಗ್ಗೆ 1873ರಲ್ಲೂ ಮತಧರ್ಮದ ಉತ್ಪತ್ತಿ ಮತ್ತು ವಿಕಾಸ ಎಂಬ ಬಗೆಗೆ 1878ರಲ್ಲೂ (ಹಿಬ್ಬರ್ಟ್ ಉಪನ್ಯಾಸಗಳು) ಮತ್ತು ಮತಧರ್ಮಗಳ ವಿವಿಧಾಂಕಗಳ ಬಗ್ಗೆ 1892ರಲ್ಲೂ (ಗಿಫರ್ಡ್ ಉಪನ್ಯಾಸಗಳು) ಇವರು ಮಾಡಿದ ಉಪನ್ಯಾಸಗಳು ಇಂದಿಗೂ ಅಮೋಘ ಎನಿಸುವಂತೆ ಬೋಧ ಪ್ರದವಾಗಿದೆ.

	ಈ ಎಲ್ಲ ವಿದ್ವತ್ ಸಾಧನೆಗಳನ್ನೂ ಮೀರಿದ ಮಹಾಸಾಧನೆಯೆಂದರೆ ಮ್ಯಾಕ್ಸ್ ಮುಲರ್ 1875ರಲ್ಲಿ ತಾವೇ ಸಂಪಾದಕತ್ವವಹಿಸಿ ಆರಂಭಿಸಿದ ಪೂರ್ವದ ಧರ್ಮ ಗ್ರಂಥಗಳು (ಸೇಕ್ರೆಡ್ ಬುಕ್ಸ್ ಆಫ್ ದಿ ಈಸ್ಟ್) ಎಂಬ ಗ್ರಂಥಮಾಲೆ. ಇದರ ಪ್ರಕಾಶನ ಸಮಸ್ತೆ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಮುದ್ರಣಾಲಯ. ಕ್ರೈಸ್ತಮತಕ್ಕಿಂತ ಭಿನ್ನವಾದ ಅನೇಕ ಮತಧರ್ಮಗಳ ಪ್ರಮುಖ ಗ್ರಂಥಗಳನ್ನೆಲ್ಲ ಪರಿಣತ ವಿದ್ವಾಂಸರಿಂದ ಇಂಗ್ಲಿಷ್‍ಗೆ ಅನುವಾದ ಮಾಡಿಸಿ ಈ ಗ್ರಂಥಮಾಲೆಯ ಸಂಪುಟಗಳಲ್ಲಿ ಒದಗಿಸಿದ್ದಾರೆ. ವಿವಿಧ ಧರ್ಮಗಳ ತೌಲನಿಕ ಅಧ್ಯಯನಕ್ಕೆ ಈ ಗ್ರಂಥಮಾಲೆ ಇಂದಿಗೂ ಬಲು ಉಪಯುಕ್ತವಾಗಿದೆ. ಇದರಲ್ಲಿ ಸ್ಮøತಿ, ಧರ್ಮಶಾಸ್ತ್ರ, ಮುಂತಾದ ಕೃತಿಗಳನ್ನೂ ವೈದಿಕ, ಬೌದ್ಧ, ಜೈನ ಮುಂತಾದ ಮತಧರ್ಮಗಳಲ್ಲಿನ ಆಕರ ಗ್ರಂಥಗಳನ್ನೂ ಆಯ್ದು ಸಂಸ್ಕøತ, ಪಾಳಿ, ಪ್ರಾಕೃತ ಮುಂತಾದ ಭಾಷೆಗಳಿಮದ ಅನುವಾದ ಮಾಡಲಾಗಿದೆ; ಅಷ್ಟೇ ಅಲ್ಲ ಚೀನಿ, ಅರೇಬಿಯನ್, ಅವೆಸ್ತ, ಪಹ್ಲವಿ ಮುಂತಾದ ಧರ್ಮಗ್ರಂಥಗಳನ್ನೂ ಸೇರಿಸಿಕೊಳ್ಳಲಾಗಿದೆ. ಈ ಗ್ರಂಥಮಾಲೆಗೆ ಸ್ವಯಂ ಮ್ಯಾಕ್ಸ್ ಮುಲರ್ ಅವರೇ ವೇದ ಧರ್ಮದ ಬಗೆಗೆ ಮೂರು ಪೂರ್ಣ ಸಂಪುಟಗಳನ್ನು ಒದಗಿಸಿದ್ದಾರೆ.

	ಇವರ ಋಗ್ವೇದ-ಸಭಾಷ್ಯ ಸಂಪುಟಗಳ ಪ್ರಥಮಾವೃತ್ತಿ 1873ರಲ್ಲಿ ಮುಗಿದು ಹೋಗಿ ಮತ್ತೆ ದ್ವಿತೀಯಾವೃತ್ತಿ 1892ರಲ್ಲಿ ಆಯಿತು. ಸಂಸ್ಕøತ ವಿದ್ವತ್ತಿನ ಕ್ಷೇತ್ರದಲ್ಲಿ ಇದು ಮ್ಯಾಕ್ಸ್ ಮುಲರ್ ಅವರ ಮೇರುಕೃತಿ. ಈ ಬೃಹತ್ಸಂಪುಟಗಳಲ್ಲದೆ ಇನ್ನೂ ಅನೇಕ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅಂದಿನ ಐಎಎಸ್ ಪರೀಕ್ಷಾರ್ಥಿಗಳಿಗೆ ಪಠ್ಯಗ್ರಂಥವೆಂದು ಇವರು ಬರೆದು ಪ್ರಕಟಿಸಿದ `ಭಾರತ, ಅದು ನಮಗೇನನ್ನು ಕಲಿಸಬಲ್ಲದು?' ಎಂಬ ಉಪನ್ಯಾಸ ಗ್ರಂಥ ಅನೇಕ ಮುದ್ರಣಗಳನ್ನು ಕಂಡು ಜನಪ್ರಿಯವಾಗಿದೆ, ಮುಖ್ಯವಾಗಿ ಈ ಗ್ರಂಥದಲ್ಲಿ ಮ್ಯಾಕ್ಸ್ ಮುಲರ್ ಕ್ರಿ. ಶ. 6ನೆಯ ಶತಮಾನದ ಹೊತ್ತಿಗೆ ಭಾರತದಲ್ಲೂ ಒಂದು ಪುನರುತ್ಥಾನ ಕಾಲವಿತ್ತೆಂಬ ಸಾಹಿತ್ಯ ಚರಿತ್ರೆಯ ವಾದವನ್ನು ಮಂಡಿಸಿದ್ದಾರೆ.

ಚೀನ, ಜಪಾನ್‍ಗಳಿಂದ ಬಂದು ಇವರ ಮಾರ್ಗದರ್ಶನ ಪಡೆದು ಮಹತ್ತ್ವದ ಸಂಶೋಧನ ಕಾರ್ಯ ಮಾಡಿರುವ ಶಿಷ್ಯರಿಂದಲೂ ಇವರ ಕೀರ್ತಿ ಅಮರವಾಗಿದೆ. ಅವರಲ್ಲಿ ಜಪಾನಿನ ಕಸವರ, ಚೀನಾದ ತಕಕುಸು ಮುಖ್ಯರು. ಚೀನಿ ಪ್ರವಾಸಿ ಇ - ತ್ಸಿಂಗನ ಭಾರತ ಯಾತ್ರೆಯ (671-90) ವರದಿಯನ್ನು ಮೊದಲು ಇಂಗ್ಲಿಷಿನಲ್ಲಿ ಒದಗಿಸಿದವನೇ ತಕಕುಸು. ಮೋನಿಯೆರ್ ವಿಲಿಯಮ್ಸ್‍ನ ಅನಂತರ ಆಕ್ಸ್‍ಫರ್ಡ್ ಸಂಸ್ಕøತ ಪೀಠಕ್ಕೆ ಬಂದ ಪ್ರಾಧ್ಯಾಪಕರೂ ತಮ್ಮ ಎಷ್ಟೋ ಪ್ರಕಟನೆಗಳಿಗೆ ಮ್ಯಾಕ್ಸ್ ಮುಲರ್ ಅವರ ನೆರವನ್ನು ಪಡೆದಿದ್ದಾರೆ. ಅನೇಕ ಭಾರತೀಯ ಹಸ್ತಪ್ರತಿಗಳ ಸಂಗ್ರಹ ಕಾರ್ಯದಲ್ಲೂ ಮ್ಯಾಕ್ಸ್ ಮುಲರ್ ಅವರಿಗೆ ಅವ್ಯಾಹತವಾದ ಆಸಕ್ತಿಯಿತ್ತು.

ಇಷ್ಟೊಂದು ಸಂಶೋಧನೆಯಲ್ಲಿ ಮುಳುಗಿದ್ದರೂ ಮ್ಯಾಕ್ಸ್ ಮುಲರ್ ಅವರಿಗೆ ಸರಸ ಸಾಹಿತ್ಯರಚನೆಯಲ್ಲೂ ನಿರಂತರ ಆಸಕ್ತಿಯಿತ್ತು. ಇವರು ಕಾಲದಿಂದ ಕಾಲಕ್ಕೆ ಬರೆದ ಅನೇಕ ಸಾಹಿತ್ಯ ಪ್ರಬಂಧಗಳು ಹಾಗೂ ಜೀವನ ಸ್ಮøತಿಗಳು ಜರ್ಮನ್ ಕಾರ್ಯಾಗಾರದಿಂದ ಸಿಡಿದ ಕಿಡಿಗಳು (ಕ್ಲಿಪ್ಸ್‍ಫ್ರಮ್ ಎ ಜರ್ಮನ್ ವರ್ಕ್‍ಷಾಪ್) ಎಂಬ ಶೀರ್ಷಿಕೆಯಲ್ಲಿ ನಾಲ್ಕು ಬೃಹತ್ ಸಂಪುಟಗಳಾಗಿ ಒಲ್ಡ್ ಲ್ಯಾನ್ಗ್ ಸೈನ್ (1898-99) ಎಂಬ ಎರಡು ಸಂಪುಟಗಳು.

ನಡೆದುದೆ ಮಾರ್ಗ ಎಂಬಂತೆ ದಿಟ್ಟ ಹೆಜ್ಜೆಯಿಂದ ಮುಂಚೂಣಿಯಲ್ಲಿ ನಡೆದು, ಹತ್ತಾರು ನೂತನ ಸಂಶೋಧನೆ ಕ್ಷೇತ್ರಗಳ ದ್ವಾರವನ್ನು ಮೊದಲು ತೆರೆದ ಕೀರ್ತಿ ಮ್ಯಾಕ್ಸ್ ಮುಲರ್ ಅವರದು. ಇವರಿಗೆ ಅಂದಿನ ಎಲ್ಲ ರಾಜ ರಾಣಿಯರ ಸಭೆ-ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಸನ್ಮಾನಗಳು ಅಪರಿಮಿತ ಪ್ರಮಾಣದಲ್ಲಿ ದೊರೆತವು. ಜರ್ಮನಿ ಸ್ವೀಡನ್, ಇಂಗ್ಲೆಂಡ್ , ಆಸ್ಟ್ರಿಯ, ಹಂಗರಿ, ರೋಮ್, ಲಿಸ್ಬನ್ ಮುಂತಾದೆಡೆಗಳ ವಿದ್ಯಾಸಂಸ್ಥೆಗಳ ಗೌರವ ಸದಸ್ಯತ್ವಗಳು ಇವರನ್ನು ಹುಡುಕಿಕೊಂಡು ಬಂದವು. ಇವರ ಸ್ಮಾರಕಾರ್ಥವಾಗಿ ಸ್ಥಾಪಿತವಾದ ಒಂದು ನಿಧಿ ಇಂದಿಗೂ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾಷೆ-ಧರ್ಮ ಮುಂತಾದವುಗಳ ಅಧ್ಯಯನದ ಪೋಷಣೆಗೆ ಮೀಸಲಾಗಿ ಉಳಿದಿದೆ. ರಾಮಕೃಷ್ಣ ಪರಮಹಂಸರ ಸಂದರ್ಶಿಸುವ ಇವರ ಅಸೆ ಮಾತ್ರ ಕೈಗೂಡಲಿಲ್ಲ.	  								
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ